ಆಪರೇಶನ್ ಅಸೈಲಮ್( ಆಶ್ರಯ ಕಾರ್ಯಾಚರಣೆ) ಎಂಬ ಈ ಸಂಚನ್ನು ಬಯಲು ಮಾಡಿದ್ದು ಮೇಜರ್ ಜೈಪಾಲ್ ಸಿಂಗ್

ಏಪ್ರಿಲ್ 9, 2011 ರಲ್ಲಿ 5:00 ಫೂರ್ವಾಹ್ನ | Posted in 004. ವಿಮೋಚನೆಯ ಸಮರದಲ್ಲಿ, ಪ್ರಕಾಶಕರ ಮಾತು | ನಿಮ್ಮ ಟಿಪ್ಪಣಿ ಬರೆಯಿರಿ

೧೯೪೫ ಕೊನೆಗೊಳ್ಳುತ್ತಿತ್ತು. ಎರಡನೇ ಮಹಾಯುದ್ಧ ಅಂತ್ಯಗೊಂಡಿತ್ತು. ಭಾರತದಲ್ಲಿ ಬ್ರಿಟಿಶ್-ವಿರೋಧಿ ಭಾವನೆ ತಾರಕಕ್ಕೇರುತ್ತಿತ್ತು. ಆ ವೇಳೆಗೆ ದೇಶದ ಸ್ವಾತಂತ್ರ್ಯ ಆಂದೋಲನದ ಮುಖಂಡತ್ವವನ್ನೇ ಇಲ್ಲದಂತೆ ಮಾಡುವ ಬ್ರಿಟಿಶ್ ಸರಕಾರದ ಸಂಚು ಬಯಲಾಯಿತು. ಆಪರೇಶನ್ ಅಸೈಲಮ್( ಆಶ್ರಯ ಕಾರ್ಯಾಚರಣೆ) ಎಂಬ ಈ ಸಂಚನ್ನು ಬಯಲು ಮಾಡಿದ್ದು ಮೇಜರ್ ಜೈಪಾಲ್ ಸಿಂಗ್. ಇದರ ಪರಿಣಾಮವಾಗಿ ಅವರು ಸೈನ್ಯವನ್ನೇ ತ್ಯಜಿಸಿ ಭೂಗತರಾಗಬೇಕಾಯಿತು. ಮುಂದೆ ಸ್ವತಂತ್ರ ಭಾರತದಲ್ಲಿ ಇದಕ್ಕಾಗಿ ಜೈಲುಶಿಕ್ಷೆಯನ್ನೂ ಅನುಭವಿಸಬೇಕಾಯಿತು!

ಬ್ರಿಟಿಶರ ದಮನಕಾರೀ ಆಡಳಿತದ ಅತ್ಯಂತ ವಿಶ್ವಸನೀಯ ಸಾಧನದ ಒಳಗಿನಿಂದಲೇ ಬ್ರಿಟಿಶ್ ವಸಾಹತುಶಾಹಿಗಳ ವಿರುದ್ಧ ಹೋರಾಡಲೆಂದೇ ೧೯೪೧ರಲ್ಲಿ ತನ್ನ ೨೫ನೇ ವಯಸ್ಸಿನಲ್ಲಿ ಬ್ರಿಟಿಶ್ ಭಾರತೀಯ ಸೈನ್ಯವನ್ನು ಸೇರಿದವರು ಜೈಪಾಲ್ ಸಿಂಗ್. ಸೈನ್ಯದೊಳಗಿನ ದೇಶಪ್ರೇಮಿ ವಿಭಾಗಗಳನ್ನು ಸಂಘಟಿಸುವಲ್ಲಿ ಅವರು ವಹಿಸಿದ ಅಮೋಘ ಪಾತ್ರದ ಬಗ್ಗೆ ಭಾರತದ ಎಡಪಂಥೀಯ ವಲಯಗಳ ಆಚೆಗೆ ಅಷ್ಟಾಗಿ ತಿಳಿದಿಲ್ಲ.

ಬ್ರಿಟಿಶ್ ವಸಾಹತುಶಾಹಿ ಸೈನ್ಯದ ಅಧಿಕಾರಿ ಹುದ್ದೆಯಿಂದ ಸಿಪಿಐ(ಎಂ)ನ ಕೇಂದ್ರ ನಾಯಕತ್ವದ ವರೆಗಿನ ಈ ಬಂಡಾಯಗಾರ, ದೇಶಪ್ರೇಮಿ, ಗೆರಿಲ್ಲಾ ಹೋರಾಟಗಾರ ಹಾಗೂ ಕ್ರಾಂತಿಕಾರಿಯ ಸುಮಾರು ನಾಲ್ಕು ದಶಕಗಳ ಜೀವನ ಪಯಣ ಅತ್ಯಂತ ರೋಮಾಂಚಕ. ಸ್ವಾತಂತ್ರ್ಯ ಬಂದಾಗ ದಿಲ್ಲಿಯಲ್ಲಿ ಸೇನಾಧಿಕಾರಿಗಳ ಮುಂದೆ ಶರಣಾಗತಿ, ಅಲ್ಲಿ ಅವರ ದೇಶಪ್ರೇಮವನ್ನು ಗುರುತಿಸಿ ಗೌರವಿಸುವ ಬದಲು ಕೊಲ್ಕತಾದ ಫೋರ್ಟ್ ವಿಲಿಯಂನಲ್ಲಿ ವಿಚಾರಣೆಯಿಲ್ಲದೆ ಬಂಧನ, ಒಂದು ವರ್ಷದ ನಂತರ ಅಲ್ಲಿಂದ ಪರಾರಿಯಾಗಿ ಹತ್ತು ವರ್ಷಗಳ ಕಾಲ ಭೂಗತ ಜೀವನ, ಈ ಸಮಯದಲ್ಲೇ ವೀರ ತೆಲಂಗಾಣ ಸಶಸ್ತ್ರ ರೈತ ಹೋರಾಟಕ್ಕೆ, ಮಣಿಪುರದ ಬುಡಕಟ್ಟು ಜನಗಳ ಸಶಸ್ತ್ರ ಹೋರಾಟಕ್ಕೆ, ಪಶ್ಚಿಮ ಬಂಗಾಳದ ಕಾಕ್‌ದ್ವೀಪ್ ಹೋರಾಟದಲ್ಲಿ, ನಂತರ ಪಾಂಡಿಚೇರಿಯಲ್ಲಿ ಫ್ರೆಂಚರ ವಿರುದ್ಧ ವಿಮೋಚನಾ ಹೋರಾಟದಲ್ಲಿ ನೆರವು, ೧೯೪೬ರಲ್ಲಿ ಬ್ರಿಟಿಶ್ ಸಾಮ್ರಾಜ್ಯಶಾಹಿಗಳು ಮಾಡಿದ್ದ ದೋಷಾರೋಪಣೆಯ ಮೇಲೆ ೧೯೭೦ರಲ್ಲಿ ಕಾಂಗ್ರೆಸ್ ಸರಕಾರದಿಂದ ಒಂದು ವರ್ಷದ ಜೈಲು ಶಿಕ್ಷೆ ! ಮತ್ತೆ ತುರ್ತು ಪರಿಸ್ಥಿತಿಯಾದ್ಯಂತ ಜೈಲುವಾಸ.

ಭೂಗತರಾಗಿದ್ದಾಗ ಕಮುನಿಸ್ಟ್ ಪಕ್ಷದತ್ತ ಆಕರ್ಷಿತರಾದ ಜೈಪಾಲ್ ಸಿಂಗ್ ಮುಂದೆ ಸಿಪಿಐ(ಎಂ)ನ ದಿಲ್ಲಿ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು; ೧೯೭೮ರಲ್ಲಿ ಜಾಲಂಧರ್‌ನಲ್ಲಿ ನಡೆದ ಸಿಪಿಐ(ಎಂ)ನ ೧೦ನೆ ಮಹಾಧಿವೇಶನದಲ್ಲಿ ಆ ಪಕ್ಷದ ಕೇಂದ್ರ ಸಮಿತಿಗೆ ಆರಿಸಲ್ಪಟ್ಟರು.
ಅವರ ಈ ರೋಮಾಂಚಕ ಬದುಕಿನ ಕೆಲವು ನೆನಪುಗಳು ೧೯೯೦ರಲ್ಲಿ ಇಂಗ್ಲೀಷಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾದವು.  ಮುಖ್ಯವಾಗಿ ಬ್ರಿಟಿಶ್ ಭಾರತೀಯ ಸೇನೆಯಲ್ಲಿ, ನಂತರ ತೆಲಂಗಾಣದ ರೈತ ಹೋರಾಟಗಾರರ ಜೊತೆಗೆ ಅವರ ಅನುಭವಗಳ  ನೆನಪುಗಳಿರುವ ಈ ಕೃತಿ ಆ ಪ್ರಕ್ಷುಬ್ಧ ಕಾಲಘಟ್ಟಗಳ ಉಜ್ವಲ ವರ್ಣನೆ ನೀಡಿದೆ. ದುರದೃಷ್ಟವಶಾತ್ ಈ ಕಥನ ಪೂರ್ಣಗೊಳ್ಳಲಿಲ್ಲ, ಅವರ ತೆಲಂಗಾಣ ಅನುಭವದ ಮಧ್ಯದಲ್ಲೇ ನಿಂತು ಹೋಗುತ್ತದೆ. ಆದರೂ ಇದು ಈಗಿನ ಯುವ ಪೀಳಿಗೆಗೆ ಅತ್ಯಂತ ಸ್ಫೂರ್ತಿದಾಯಕ.

ಕೆಲವು ವರ್ಷಗಳ ಹಿಂದೆ ಅವರ ಈ ನೆನಪುಗಳು ಕನ್ನಡದಲ್ಲಿ ಐಕ್ಯರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದವು. ಅವನ್ನು ಈಗ ಸಂಗ್ರಹಿಸಿ ಪುಸ್ತಕರೂಪದಲ್ಲಿ ಪ್ರಕಟಿಸುತ್ತಿದ್ದೇವೆ. ಇದನ್ನು ಅನುವಾದಿಸಿದ್ದ ಕೊಟ್ಟ ಪತ್ರಕರ್ತರಾದ ವಿಶ್ವ ಕುಂದಾಪುರ  ನಮಗಾಗಿ ಇದನ್ನು ಈಗ ಸಂಗ್ರಹಿಸಿ ಕೊಟ್ಟಿದ್ದಾರೆ. ಅವರಿಗೆ ಹಾಗೂ ಐಕ್ಯರಂಗಕ್ಕೆ ನಾವು ಕೃತಜ್ಞರು. ಜಿ.ವಿ. ಶ್ರೀರಾಮ ರೆಡ್ಡಿ, ಸಿಪಿಐ(ಎಂ)ನ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯರು, ಒಂದು ಪರಿಚಯಾತ್ಮಕ ಮುನ್ನುಡಿಯನ್ನು ನೀಡಿದ್ದಾರೆ. ಅವರಿಗೆ ನಮ್ಮ ಹಾರ್ದಿಕ ಕೃತಜ್ಞತೆಗಳು. ಈ ಪುಸ್ತಕವನ್ನು ಪ್ರಕಟಣೆಗೆ ಸಿದ್ಧಗೊಳಿಸುವಲ್ಲಿ ನೆರವಾದ ಜನಶಕ್ತಿಯ ಸಂಗಾತಿ ವೀರಣ್ಣ ಕಲ್ಮನಿ ಹಾಗೂ ಮುಖಪುಟ ರಚಿಸಿರುವ ಸಂಗಾತಿ  ಎಂ.ರಾಮು ಅವರಿಗೂ ನಮ್ಮ  ಕೃತಜ್ಞತೆಗಳು ಸಲ್ಲಬೇಕು.

ನಿಮ್ಮ ಟಿಪ್ಪಣಿ ಬರೆಯಿರಿ »

RSS feed for comments on this post. TrackBack URI

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.
Entries and ಟಿಪ್ಪಣಿಗಳು feeds.