ಶ್ರೇಷ್ಠ ಕ್ರಾಂತಿಕಾರಿಯ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ತರುತ್ತಿರುವುದು ನಿಜವಾಗಿಯೂ ಹೆಮ್ಮೆ ಪಡುವಂತಹ ವಿಷಯ

ಏಪ್ರಿಲ್ 9, 2011 ರಲ್ಲಿ 5:10 ಫೂರ್ವಾಹ್ನ | Posted in 004. ವಿಮೋಚನೆಯ ಸಮರದಲ್ಲಿ, ಮುನ್ನುಡಿ | ನಿಮ್ಮ ಟಿಪ್ಪಣಿ ಬರೆಯಿರಿ
ಟ್ಯಾಗ್ ಗಳು: ,

ನಾನು ಬ್ರಿಟೀಷ್ ಸೈನ್ಯದಲ್ಲಿ ಸೇರಿದ್ದು, ಬ್ರಿಟೀಷರಿಗೆ ಸೇವೆ ಸಲ್ಲಿಸಲಿಕ್ಕಾಗಲಿ ಅಥವಾ ನಾನು ಶಾಶ್ವತವಾಗಿ ಸೈನ್ಯದಲ್ಲಿರಬೇಕೆಂದಾಗಲೀ ಅಲ್ಲ, ಬದಲಿಗೆ ಬ್ರಿಟೀಷ್ ಸೈನ್ಯದಲ್ಲಿ ಸೇರಿದರೆ ವಿದೇಶಿ ಮಾಲಕರ ವಿರುದ್ಧ ಹೋರಾಡಲು ಬಹಳಷ್ಟು ಆಯುಧಗಳು ಸೇರಿ ಹಲವಾರು ಸೌಲಭ್ಯಗಳು ನನ್ನ ವಶದಲ್ಲಿರುತ್ತವೆ ಮತ್ತು ನನ್ನ ಮಾತೃ ಭೂಮಿಯ ದಾಸ್ಯಕ್ಕೆ, ಅವಮಾನಕ್ಕೆ ತಿರುಗಿಸಿ ಹೊಡೆಯಲು ಅನುಕೂಲವಿರುತ್ತದೆ ಎಂಬ ಆಶೆಗಳನ್ನು ಹೊತ್ತು ಆಕ್ರೋಶದಿಂದ ಸೈನ್ಯ ಸೇರಿದೆ. ಕಾರಣ ಆಗ ನನಗಿನ್ನೂ ೧೪ ವರ್ಷ. ಗಾಂಧಿಯವರ ನಾಯಕತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕೆ ಬ್ರಿಟಿಷ್ ಪೊಲೀಸರ ಚಾಟಿಗಳಿಂದ ಹೊಡೆದು ನನ್ನ ಮೈಮೇಲೆ ಉಂಟುಮಾಡಿದ್ದ ಗಾಯದ ಬರೆಗಳನ್ನು ಹೊತ್ತುಕೊಂಡು ಸೈನ್ಯಕ್ಕೆ ಬಂದಿದ್ದೆ. ಆದ್ದರಿಂದ ಆ ಸಿಟ್ಟು ಆಕ್ರೋಶ ಮತ್ತು ಅವಮಾನಗಳು ನನ್ನ ರಕ್ತವನ್ನು ಕುದಿಸುತ್ತಿದ್ದವು. ಜೊತೆಗೆ ಗಾಂಧಿಯವರ ಅಹಿಂಸಾವಾದದ ಬಗ್ಗೆ ಅನುಮಾನವನ್ನು ಹೊತ್ತಿಕೊಂಡೆ ಸೈನ್ಯಕ್ಕೆ ಬಂದಿದ್ದೆ ಎಂದು ಕಾಂ.ಜೈಪಾಲ್‌ಸಿಂಗ್ ೭-೧೧-೧೯೪೭ ರಲ್ಲಿ ಫೋರ್ಟ್ ವಿಲಿಯಂ ಜೈಲಿನಿಂದ ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ರವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ನೆಹರೂ ರವರಿಗೆ ಕಾಂ|| ಜೈಪಾಲ್ ಯಾಕೆ ಬರೆದರು ಅದರಲ್ಲಿ ಇನ್ನೂ ಯಾವ ಯಾವ ಅಂಶಗಳಿಗೆ ಎಂಬುದನ್ನು ಈ ಪುಸ್ತಕದಲ್ಲಿ ಓದಿ ತಿಳಿಯಬಹುದು.

ಕಾಂ|| ಜೈಪಾಲ್‌ಸಿಂಗ್ (ಅವರು ಸೈನ್ಯದಲ್ಲಿ ಮೇಜರ್ ಆಗಿದ್ದರು. ಆದ್ದರಿಂದ ಅವರನ್ನು ಮೇಜರ್ ಜೈಪಾಲ್ ಸಿಂಗ್ ಎಂದೇ ಕರೆಯಲಾಗುತ್ತಿತ್ತು) ದೇಶ ಕಂಡ ಶ್ರೇಷ್ಠ ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿ ಬೆಳೆದವರು. ಉತ್ತರ ಪ್ರದೇಶದ ಮುಜಾಫರ್  ನಗರ ಜಿಲ್ಲೆಯ ಒಂದು ಕುಗ್ರಾಮದಲ್ಲಿ ಬಡ ಜಾಟ್ ರೈತ ಕುಟುಂಬದಲ್ಲಿ ಹುಟ್ಟಿದ ಬಾಲಕ. ಬಾಲ್ಯದಲ್ಲಿ ಎಮ್ಮೆಗಳನ್ನು ಮೇಯಿಸುತ್ತಿದ್ದ ಹುಡುಗ ಎಂ.ಎ. ಪದವಿ ಪಡೆದು ಬ್ರಿಟಿಷರ ಸೈನ್ಯ ಸೇರಿದ. ಅವರು ಸೈನ್ಯ ಸೇರಿದ ಸಂದರ್ಭ ಎರಡನೇ ಮಹಾ ಪ್ರಪಂಚಯುದ್ಧ ನಡೆಯುತ್ತಿತ್ತು. ಅದೇ ಸಂದರ್ಭದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ನಡೆಯುತ್ತಿತ್ತು ಮತ್ತು ಆಗ ತಾನೇ ಹಿಟ್ಲರ್ ರಷ್ಯಾದ ಮೇಲೆ ಯುದ್ಧ ಸಾರಿದ್ದ. ಜಾಟ್ ಜನಾಂಗದ ಆ ಮೈಕಟ್ಟು, ಎದೆಗಾರಿಕೆ, ಆಕ್ರೋಶ ಮತ್ತು ಸ್ವಾಭಿಮಾನವನ್ನು ಹೊತ್ತು ಸೈನ್ಯಕ್ಕೆ ಸೇರಿದ್ದ. ಜೊತೆಗೆ ಪರಕೀಯರ ಆಡಳಿತದ ಬಗ್ಗೆ ಇದ್ದ ತಿರಸ್ಕಾರ, ಬ್ರಿಟಿಶರು ಮಾತೃಭೂಮಿಯನ್ನು ಹೀರಿ ಹಿಪ್ಪೆ ಮಾಡುತ್ತಿದ್ದ ವಿಧಾನ, ಭಾರತೀಯರ ಬಗ್ಗೆ ಬ್ರಿಟಿಷರಿಗೆ ಇದ್ದ ಕೀಳು ಭಾವನೆ, ಅವರು ಭಾರತೀಯರಿಗೆ ಕೊಡುತ್ತಿದ್ದ ಹಿಂಸೆ, ಮಾಡುತ್ತಿದ್ದ ಅವಮಾನಗಳನ್ನು ಕಂಡು ಅನುಭವಿಸಿದ್ದ ಆ ಅಪ್ಪಟ ಭಾರತೀಯ ಯುವಕನ ರಕ್ತ ಕುದಿಯುತ್ತಿತ್ತು. ಸೇನೆಗೆ ಸೇರಿದರೆ ಪರಕೀಯರ ದಬ್ಬಾಳಿಕೆ, ಅವರು ಕೊಡುತ್ತಿದ್ದ ಹಿಂಸೆಗಳ ವಿರುದ್ಧ ಸೇಡು ತೀರಿಸಿಕೊಳ್ಳಬಹುದು ಎಂದು ಭಾವಿಸಿ ಸೇನೆಗೆ ಸೇರಿದ್ದ. ಆದರೆ ಸೇನೆಯ ಒಳಗಿದ್ದು ಈ ರೀತಿಯಲ್ಲಿ ಬ್ರಿಟೀಷರ ವಿರುದ್ಧ ಸೇಡು ತೀರಿಸಿಕೊಳ್ಳುವುದು ಎಷ್ಟು ಅಪಾಯಕಾರಿ ಎಂದು ಊಹಿಸಿದರೆ ಮೈ ನಡುಕ ಉಂಟಾಗುತ್ತದೆ. ಆದರೆ ಕಾಂ|| ಜೈಪಾಲ್ ಎದೆಗುಂದಲಿಲ್ಲ. ಸೈನ್ಯ ಸೇರಿದ ದಿನದಿಂದಲೇ ಬ್ರಿಟಿಷರ ವಿರುದ್ಧ ಸೈನ್ಯದಲ್ಲಿ ದಂಗೆ ಎಬ್ಬಿಸಲು ಯೋಜನೆಗಳನ್ನು ರೂಪಿಸಲು ಪ್ರಯತ್ನ ಪ್ರಾರಂಭ ಮಾಡಿದರು.

ತನ್ನ ಹಾಗೆ ಬ್ರಿಟಿಷರ ವಿರುದ್ಧ ಸಿಟ್ಟು, ದ್ವೇಷ ಮತ್ತು ವಿಮೋಚನೆಯ ಬಗ್ಗೆ ಆಸಕ್ತಿಯಿದ್ದ ಸಹಯೋಗಿಗಳನ್ನು ಮತ್ತು ಅಧಿಕಾರಿಗಳನ್ನು ಒಂದು ಕಡೆ ಸೇರಿಸಿ ರಹಸ್ಯವಾಗಿ ನಡುರಾತ್ರಿಗಳವರೆಗೂ ಚರ್ಚೆ ಮಾಡುತ್ತಿದ್ದರು. ಅದರ ನಂತರ ಸೈನ್ಯದಲ್ಲಿ ಬ್ರಿಟಿಷ್ ಸರ್ಕಾರದ ವಿರೋಧಿ ಗುಂಪೊಂದನ್ನು ರಚಿಸಲು ತೀರ್ಮಾನಿಸಿದರು. ಅದರ ಫಲವಾಗಿ s ಒಂದು ಭೂಗತ ಕ್ರಿಯಾ ಮಂಡಳಿಯನ್ನು ರಚಿಸಿದರು. ಇದು ಯಾವ ರೀತಿಯಲ್ಲಿ ಕೆಲಸ ಮಾಡಬೇಕೆಂಬ ರೂಪುರೇಷೆಗಳನ್ನು ಕಾಂ|| ಜೈಪಾಲ್‌ರವರೇ ರೂಪಿಸುತ್ತಿದ್ದರು.
ಬ್ರಿಟಿಷ್ ಸೈನ್ಯದ ಪೈಶಾಚಿಕ ಸ್ವರೂಪವನ್ನು ಬಲ್ಲವರಿಗೆ ಕಾಂ|| ಜೈಪಾಲ್ ಮತ್ತು ಅವರ ಸಂಗಡಿಗರು ಮಾಡುತ್ತಿರುವುದು ಎಷ್ಟು ಅಪಾಯಕಾರಿ ಎಂಬುದು ಅರ್ಥವಾಗುತ್ತದೆ. ಈ ಯೋಜನೆ ಏನಾದರೂ ಬಹಿರಂಗವಾದರೆ ಮಿಲಿಟರಿ ಕಾನೂನಿನ ಪ್ರಕಾರ ಕನಿಷ್ಠ ಮರಣ ಶಿಕ್ಷೆ. ಅಂದರೆ ಬ್ರಿಟಿಷರ ಸೈನ್ಯದಲ್ಲಿದ್ದುಕೊಂಡೇ ಬ್ರಿಟೀಷರ ವಿರುದ್ಧ ದಂಗೆ ಏಳುವುದು! ಆಲೋಚನೆಗೂ ನಿಲುಕದ ಅಪಾಯಕಾರಿ ಕೆಲ. ಆದರೆ ಈ ಯೋಜನೆಯಲ್ಲಿರುವ ಪ್ರಮುಖ ಅಂಶ ಎಂದರೆ “ಸೈನಿಕರ ದಂಗೆಯನ್ನು ಸ್ವಾತಂತ್ರ್ಯ ಹೋರಾಟದ ಚಳುವಳಿಯೊಂದಿಗೆ ಸಮೀಕರಿಸಬೇಕೆಂಬ ಆಶಯ.

ಇದರ ಜೊತೆಗೆ ಸೈನ್ಯದಲ್ಲಿ ಇವರು ಏರ್ಪಡಿಸಿದ್ದ ಗುಪ್ತ ಕ್ರಿಯಾ ಮಂಡಳಿಯ ಉದ್ದೇಶ ಮತ್ತು ಕಾರ್ಯಯೋಜನೆಗಳನ್ನು ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೂ ಮತ್ತು ರಾಷ್ಟ್ರೀಯ ಚಳುವಳಿಯ ಮುಖಂಡರಿಗೂ ತಿಳಿಸಬೇಕೆಂಬ ದೂರದೃಷ್ಟಿ ಕಾಂ.ಜೈಪಾಲರಗಿದ್ದ ರಾಜಕೀಯ ತಿಳುವಳಿಕೆಯ ಉನ್ನತ ಮಟ್ಟವನ್ನು ತೋರಿಸುತ್ತದೆ.
ಸ್ವಾತಂತ್ರ್ಯ ಚಳುವಳಿಯ ತೀವ್ರತೆ ಹೆಚ್ಚಾಗತೊಡಗಿತು. ಬ್ರಿಟಿಷರು ಈ ದೇಶವನ್ನು ಬಿಟ್ಟು ಹೋಗುವುದು ಅನಿವಾರ್ಯವೆಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಬ್ರಿಟಿಷರು ಈ ದೇಶ ಬಿಡುವ ಸಂದರ್ಭ ಬಂದಾಗ ನಮ್ಮ ದೇಶಕ್ಕೆ ಅವರು ಮಾಡಿದ ದ್ರೋಹಕ್ಕೆ ಇತಿಹಾಸ ಅವರನ್ನು ಎಂದಿಗೂ ಕ್ಷಮಿಸಲಾರದು. ದೇಶವನ್ನು ಧರ್ಮದ ಆಧಾರದ ಮೇಲೆ ಒಡೆಯುವ ದ್ರೋಹದ ಕೆಲಸದ ಜೊತೆಗೆ ನಮ್ಮ ದೇಶದ ಈಶಾನ್ಯ ಭಾಗದಲ್ಲಿರುವ ವಿವಿಧ ಬುಡಕಟ್ಟಿನ ವಿವಿಧ ಜಾತಿಗಳನ್ನು ದೇಶದ ವಿರುದ್ಧ ಎತ್ತಿಕಟ್ಟಿ ಪ್ರತ್ಯೇಕತಾವಾದಿ ಶಕ್ತಿಗಳನ್ನು ಪ್ರೋತ್ಸಾಹಿಸಲು ಬೇಕಾದ ರಹಸ್ಯ ಕಾರ್ಯಸೂಚಿಯನ್ನು ಮತ್ತು ಅದರ ನೀಲ ನಕ್ಷೆಯನ್ನು ಬ್ರಿಟಿಶರು ಗುಟ್ಟಾಗಿ ರೂಪಿಸಿ ಕಾರ್ಯಗತ ಮಾಡಲು ಸಿದ್ಧತೆ ನಡೆಸುತ್ತಿದ್ದರು. ದೇಶಕ್ಕೆ ಮುಂದೆ ಮುಳುವಾಗಬಹುದಾದ ಈ ದೇಶಭಂಜಕ ಬ್ರಿಟಿಶರ ಕುತಂತ್ರವನ್ನು ಕಾಂ|| ಜೈಪಾಲ್ ಮತ್ತು ಅವರ  ಗುಪ್ತ ಮಂಡಳಿ ಕಂಡುಹಿಡಿಯಿತು. ಈ ಷಡ್ಯಂತ್ರವನ್ನು ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೆ ಮತ್ತು ದೇಶದ ಎಲ್ಲಾ ಮುಖಂಡರಿಗೆ ತಿಳಿಸಲು ಕಾಂ|| ಜೈಪಾಲ್ ರಹಸ್ಯವಾಗಿ ತಮ್ಮ ಜೀವನನ್ನು ಪಣಕ್ಕಿಟ್ಟು ಕಾರ್ಯರೂಪಕ್ಕೆ ತಂದರು. ಆದರೆ ಬ್ರಿಟಿಶರ ಇಂತಹ ದ್ರೋಹದ ಕೆಲಸವನ್ನು ಕಮ್ಯೂನಿಸ್ಟ್ ಪಕ್ಷ ಒಂದನ್ನು ಬಿಟ್ಟು ಬೇರೆ ಯಾವ ರಾಜಕೀಯ ಪಕ್ಷ ಮತ್ತು ಮುಖಂಡರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲವೆಂದು ಕಾಂ|| ಜೈಪಾಲ್ ಬಹಳ ನೋವಿನಿಂದ ತಿಳಿಸುತ್ತಾರೆ.

ಬ್ರಿಟಿಶರ ಕುತಂತ್ರದಿಂದಾಗಿ ಇಂದು ದೇಶವನ್ನು ಅಪಾಯಕಾರಿಯಾಗಿ ಕಾಡುತ್ತಿರುವ ಮತಾಂಧ ಮೂಲಭೂತವಾದ ಮತ್ತು ಪ್ರತ್ಯೇಕತಾವಾದಗಳನ್ನು ಇಂದು ನಾವು ಅನುಭವಿಸಬೇಕಾಗಿದೆ. ಬ್ರಿಟಿಶ್ ಸರಕಾರ  ಈ ದೇಶ ವಿಭಜಕ ದ್ರೋಹದ ಕೆಲಸವನ್ನು ಕಾರ್ಯರೂಪಕ್ಕೆ ತರಲು ಒಂದು ಕಡೆ ಜಿನ್ನಾ ಮತ್ತು ಮುಸ್ಲಿಂಲೀಗ್‌ನ್ನು ಎತ್ತಿ ಕಟ್ಟುತ್ತಾ ಮತ್ತೊಂದು ಕಡೆ ದೇಶದ ಈಶಾನ್ಯ ಭಾಗದಲ್ಲಿನ ಪ್ರತ್ಯೇಕತಾ ಶಕ್ತಿಗಳಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಲು ತನ್ನ ಸೈನಿಕ ವಿಮಾನಗಳನ್ನು ಬಳಸಲು ತೀರ್ಮಾನಿಸುತ್ತದೆ. ಈ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವ ಜವಾಬ್ದಾರಿಯನ್ನು ಕಾಂ|| ಜೈಪಾಲ್‌ರಿಗೆ ವಹಿಸುತ್ತದೆ. ಇಂತಹ ಆಯುಧಗಳನ್ನು ಹೊತ್ತು ಹೊರಟ ವಿಮಾನ     “ದೊಹಕ ಬರಿ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಸೈನ್ಯದಿಂದ ತಪ್ಪಿಸಿಕೊಂಡು ಅವರು ಭೂಗತರಾಗುತ್ತಾರೆ(೧೯೪೩ ಸೆಪ್ಟೆಂಬರ್ ೩ನೇ ತಾರಿಖು). ಇಷ್ಟೊತ್ತಿಗಾಗಲೇ ಕಾಂ|| ಜೈಪಾಲ್ ತನ್ನ ರಾಜಕೀಯ ಸಿದ್ಧಾಂತಗಳ ಬಗ್ಗೆ ಸ್ಪಷ್ಟ ನಿಲುವನ್ನು ಪಡೆದಿದ್ದರು ಮತ್ತು ಕಮ್ಯೂನಿಸ್ಟ್ ಸಿದ್ಧಾಂತಕ್ಕೆ ಅವರು ಮಾರು ಹೋಗಿದ್ದರು.
ಆ ಸಂದರ್ಭದಲ್ಲಿ ಕಮ್ಯೂನಿಸ್ಟ್ ಪಕ್ಷದ ನಾಯಕತ್ವದಲ್ಲಿ ತೆಲಂಗಾಣ ರೈತರ ಸಶಸ್ತ್ರ ಹೋರಾಟ ನಡೆಯುತ್ತಿತ್ತು. ಅದರ ಜೊತೆಗೆ ಪಕ್ಷದ ಒಳಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಬಗ್ಗೆ ತೀವ್ರ ರೀತಿಯಾದ ಚರ್ಚೆಗಳು ನಡೆಯುತ್ತಿದ್ದವು. ಇಂತಹ ಸಂದರ್ಭದಲ್ಲಿ ಸೈನ್ಯದಿಂದ ಹೊರಬಂದು ಕಮ್ಯೂನಿಸ್ಟ್ ಪಕ್ಷದ ಚಟುವಟಿಕೆಗಳಲ್ಲಿ ಮತ್ತು ಹೋರಾಟಗಳಲ್ಲಿ ಭಾಗವಹಿಸಲು ಅವರು ತೀರ್ಮಾನಿಸಿದರು. ಅವರು ಸೈನ್ಯದಲ್ಲಿದ್ದು ಪಡೆದಿದ್ದ ಶಸ್ತ್ರಾಸ್ತ್ರಗಳ ಪರಿಣತಿಯನ್ನು ಪರಿಗಣಿಸಿ ತೆಲಂಗಾಣ ಹೋರಾಟದಲ್ಲಿ ತೊಡಗಿದ್ದ ಗೆರಿಲ್ಲಾ ದಳಗಳಿಗೆ ತರಬೇತಿಯನ್ನು ನೀಡಲು ಪಕ್ಷ ತೀರ್ಮಾನಿಸಿ ಅವರನ್ನು ತೆಲಂಗಾಣಕ್ಕೆ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ಅವರು ಆ ಹೋರಾಟಕ್ಕಾಗಿ ನೀಡಿದ ಕಾಣಿಕೆ ಅನನ್ಯ. ಅವರಲ್ಲಿದ್ದ ಸಾಹಸ ಅವರು ತೋರಿಸುತ್ತಿದ್ದ ಸಂಯಮ, ಗೆರಿಲ್ಲಾ ದಳಗಳ ಜೊತೆಗಿನ ಅವರ ಒಡನಾಟ, ಜೊತೆಗೆ ಈ ಶ್ರೇಷ್ಠ ಕಾಂತಿಕಾರಿಯ ತ್ಯಾಗಮಯ ಜೀವನವು ಎಲ್ಲರಿಗೂ ಮಾದರಿಯಾಗಿತ್ತು. ಗೆರಿಲ್ಲಾ ಹೋರಾಟದಲ್ಲಿ ಅವರ ದೀರ್ಘಕಾಲದ ಸಂಗಾತಿ ಮತ್ತು ತೆಲಂಗಾಣ ಹೋರಾಟದ ನಾಯಕರಲ್ಲಿ ಒಬ್ಬರಾದ ಕಾಂ|| ಎಲ್. ಬಿ. ಗಂಗಾಧರರಾವ್ ಅವರ ಕಾಂ.ಜೈಪಾಲ್ ಸಿಂಗ್‌ರವರಿಗೆ ಸಲ್ಲಿಸಿದ ಶ್ರದ್ಧಾಂಜಲಿ ಲೇಖನದಲ್ಲಿ ಮನಸ್ಸು ಕದಡುವ ರೀತಿಯಲ್ಲಿ ವಿವರಿಸಿದ್ದಾರೆ.

ಕಾಂ|| ಜೈಪಾಲ್ ಸಿಂಗ್ ಬ್ರಿಟಿಶರಿಂದ ತಪ್ಪಿಸಿಕೊಂಡು ಭೂಗತ ಜೀವನಕ್ಕೆ ಬಂದಾಗಿನಿಂದ ಬ್ರಿಟಿಶ್ ಸೈನ್ಯಾಧಿಕಾರಿಗಳು ಮತ್ತು ಸರ್ಕಾರ ಮೇಜರ್ ಜೈಪಾಲ್‌ಸಿಂಗ್ ಒಬ್ಬ ಕಳ್ಳನೆಂದು, ಸೈನ್ಯದಿಂದ ಹಣವನ್ನು ದೋಚಿದ್ದಾನೆಂದು ದೇಶದ್ರೋಹದ ಆಪಾದನೆಯ ಅಡಿಯಲ್ಲಿ ಅವರ ಮೇಲೆ ಮೊಕದ್ದಮೆಯನ್ನು ಹೂಡಿ ಸೈನ್ಯದಿಂದ ತಪ್ಪಿಸಿಕೊಂಡಿದ್ದಾನೆಂದು ಪ್ರಕಟಣೆ ಮಾಡಿತ್ತು. ಕಾಂ| ಜೈಪಾಲ್ ಭೂಗತ ಜೀವನದಲ್ಲಿದ್ದುಕೊಂಡೇ ಗೆರಿಲ್ಲಾ ಪಡೆಗಳಿಗೆ ತರಬೇತಿ ನೀಡುತ್ತಿರುವಾಗಲೇ ದೇಶ ವಿಭಜನೆಯೊಂದಿಗೆ ಸ್ವಾತಂತ್ರ್ಯ ಬಂತು. ಆಗ ಕಾಂ|| ಜೈಪಾಲ್‌ಸಿಂಗ್ ಅವರು ಒಂದು ನಿರ್ದಿಷ್ಟ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಆಗ ತಾನೆ ಸ್ವಾತಂತ್ರ್ಯ ಹೊಂದಿದ್ದ ಭಾರತದ ಸರ್ಕಾರಕ್ಕೆ ಶರಣಾಗತಿಯಾಗುವುದು ಅಥವಾ ಅವರ ಕೆಲವು ಸ್ನೇಹಿತರ ಸಲಹೆಯಂತೆ ಏಶಿಯಾ ಖಂಡದ ಯಾವುದಾದರೂ ಒಂದು ದೇಶದಲ್ಲಿ ಹೋಗಿ ನೆಲೆಸುವುದು. ಆದರೆ ಕಾಂ|| ಜೈಪಾಲ್ ಸಿಂಗ್ ಅವರು ತನ್ನ ಮೇಲೆ ಬ್ರಿಟಿಶ್ ಸರ್ಕಾರ ಹುಟ್ಟಿಸಿದ್ದ ತಪ್ಪು ಅಭಿಪ್ರಾಯಗಳು ಮತ್ತು ಅನುಮಾನಗಳನ್ನು ದೂರ ಮಾಡಿ ತನ್ನ ನಿಜ ಆಶಯವನ್ನು ಮತ್ತು ನಿಷ್ಕಲ್ಮಶ ದೇಶಪ್ರೇಮವನ್ನು ದೇಶದ ಮುಂದೆ ಸಾದರಪಡಿಸಲು ಭಾರತ ಸರ್ಕಾರಕ್ಕೆ ಶರಣಾಗತಿಯಾಗಲು ತೀರ್ಮಾನಿಸಿದರು. ಈ ಧೈರ್ಯ ಮಾಡಲು ನಮ್ಮ ದೇಶ ಸ್ವತಂತ್ರವಾಗಿದೆ, ಬ್ರಿಟಿಶ್ ಸಾಮ್ರಾಜ್ಯಶಾಹಿಗಳು ರೂಪಿಸಿದ್ದ ಕಾನೂನುಗಳು ನಾಶವಾಗುತ್ತವೆ ಎಂದು ಮೂರ್ಖತನದಿಂದ ಭಾವಿಸಿ ತಪ್ಪು ಮಾಡಿದೆ ಎಂದು ಕಾಂ| ಜೈಪಾಲ್ ಒಂದು ಸಂದರ್ಭದಲ್ಲಿ ಪಶ್ಚಾತ್ತಾಪ ಪಡುತ್ತಾರೆ. ಭಾರತ ಸರ್ಕಾರಕ್ಕೆ ಶರಣಾಗಲು ತೀರ್ಮಾನಿಸಿ ೧೯೪೭ ಸೆಪ್ಟೆಂಬರ್‌ನಲ್ಲಿ ಜನರಲ್ ರಾಜೇಂದ್ರಸಿಂಗ್ ಮುಂದೆ ಶರಣಾಗತನಾಗಿ, ಅದರಿಂದಾಗಿ ಕಲ್ಕತ್ತಾದ ಪೋರ್ಟ್‌ವಿಲಿಯಂ ಜೈಲಿಗೆ ಹೋಗುತ್ತಾರೆ. ದುರಂತದ ಸಂಗತಿಯೆಂದರೆ ಬ್ರಿಟಿಶರು ಸೈನ್ಯಾಪರಾಧಿಗಳನ್ನು ಯಾವ ರೀತಿಯಲ್ಲಿ ವಿಚಾರಣೆಗೆ ಒಳಪಡಿಸಿದರೋ ಅದೇ ರೀತಿಯಲ್ಲಿ ಸ್ವತಂತ್ರ ಭಾರತ ಸರ್ಕಾರವೂ ಕೂಡ ಕಾಂ|| ಜೈಪಾಲ್ ಸಿಂಗ್‌ರನ್ನು ವಿಚಾರಣೆಗೆ ಗುರಿಪಡಿಸಿತು. ಬ್ರಿಟಿಶ್ ಸಾಮ್ರಾಜ್ಯಶಾಹಿಗಳು ದೇಶಕ್ಕೆ ಸ್ವಾತಂತ್ರ್ಯವನ್ನು ಕೊಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾದಾಗ ಈ ದೇಶವನ್ನು ಛಿದ್ರ ಮಾಡಲು ಮಾಡಿದ ಕುತಂತ್ರದ ರಹಸ್ಯವನ್ನು ಬಯಲು ಮಾಡಿದ್ದು ತಪ್ಪೇ? ಬ್ರಿಟೀಶರು ‘ವಿಶ್ವಾಸ ಘಾತಕನೆಂದು ನನಗೆ ಹಣೆಪಟ್ಟಿ ಕಟ್ಟಿದರು. ಬ್ರಿಟಿಶರ ಅಧಿಕಾರವನ್ನು ಪ್ರಶ್ನಿಸಿ ಅವರು ಮಾಡಿದ ಕುತಂತ್ರ ಮತ್ತು ಷಡ್ಯಂತ್ರಗಳಿಂದ ನನ್ನ ಮಾತೃಭೂಮಿಯನ್ನು ರಕ್ಷಿಸಲು ಅವರ ಕುಟಿಲ ರಹಸ್ಯಗಳನ್ನು ಬಯಲು ಮಾಡಿದ್ದು, ಬ್ರಿಟಿಷರ ದೇಶದ್ರೋಹಿ ಪ್ರಯತ್ನಗಳನ್ನು ಕಡೆಯವರೆವಿಗೂ ಎದುರಿಸಲು ನಮ್ಮ ದೇಶದ ಕ್ರಾಂತಿಕಾರಿ ಶಕ್ತಿಗಳನ್ನು ಸಮನ್ವಯಗೊಳಿಸಿದ್ದು ನನ್ನ ಅಪರಾಧವೇ ಎಂದು ಪಂಡಿತ್ ನೆಹರೂರವರಿಗೆ ಬರೆದ ಪತ್ರದಲ್ಲಿ ಪ್ರಶ್ನಿಸಿದ್ದಾರೆ. ಇವೆಲ್ಲವೂ ನಿಮ್ಮ ಪ್ರಭುತ್ವದ ದೃಷ್ಟಿಯಲ್ಲಿ ತಪ್ಪು ಎಂದಾದರೆ, ನಾನು ಇನ್ನೂ ಅನೇಕ ತಪ್ಪುಗಳನ್ನು ಮಾಡಿದ್ದೇನೆ, ಸಾಮ್ರಾಜ್ಯಶಾಹಿಗಳ ಸರ್ಕಾರದ ವಿರುದ್ಧ ಯುದ್ಧವನ್ನು ಮಾಡಲು ಷಡ್ಯಂತ್ರವನ್ನು ಮಾಡಿದ್ದೇನೆ. ಸೈನ್ಯದ ರಹಸ್ಯಗಳನ್ನು ಬಯಲು ಮಾಡಿದ್ದೇನೆ. ಬ್ರಿಟಿಶರ ವಿರುದ್ಧ ಯುದ್ಧ ಮಾಡಲು ಸ್ವಂತ ಸೈನ್ಯವನ್ನು ತಯಾರು ಮಾಡಿದ್ದೇನೆ. ಹೌದು ಇವೆಲ್ಲವನ್ನು ಮಾಡುವುದು ನನ್ನ ಜನ್ಮಸಿದ್ಧ ಹಕ್ಕು, ಈ ಹಕ್ಕನ್ನು ನಾನು ತಪ್ಪದೇ ಪ್ರಯೋಗಿಸುತ್ತೇನೆ. ಯಾಕೆಂದರೆ ಇಂಗ್ಲೆಂಡಿನ ಅಂದಿನ ಪ್ರಧಾನಮಂತ್ರಿ ಚರ್ಚಿಲ್, ಬ್ರಿಟಿಶರು ಬಿಟ್ಟು ಹೋದರೆ ಭಾರತ ದೇಶ ಸುಟ್ಟು ಬೂದಿ ಆಗುತ್ತದೆಂದು, ಅದನ್ನು ನಿಜ ಮಾಡಲು ಅವರು ದೇಶದ ವಿರುದ್ಧ ಎಷ್ಟು ಷಡ್ಯಂತ್ರಗಳನ್ನು ಮಾಡಿದರು, ನಮ್ಮ ದೇಶದ ನೂರಾರು ನಗರಗಳಲ್ಲಿ, ಸಾವಿರಾರು ಹಳ್ಳಿಗಳಲ್ಲಿ ಸಾಮ್ರಾಜ್ಯಶಾಹಿ ಏಜೆಂಟರು ಟೈಂ ಬಾಂಬ್‌ಗಳಂತಹ ವಿಷ ಬೀಜಗಳನ್ನು ಬಿತ್ತಿ ನನ್ನ ದೇಶದ ಜನರನ್ನು ಬಲಿ ತೆಗೆದುಕೊಂಡು ನನ್ನ ದೇಶದ ಲಕ್ಷ-ಲಕ್ಷ ಜನರನ್ನು ಸಾಯಿಸಿದರು, ಚಿತ್ರಹಿಂಸೆಗಳನ್ನು ನೀಡಿದರು ಇಂತಹವರ ವಿರುದ್ಧ ನಾನು ನಡೆಸಿದ ಹೋರಾಟ ನನ್ನ ಹಕ್ಕು, ಇದನ್ನು ಯಾರಿಂದಲೂ ಕಿತ್ತುಕೊಳ್ಳಲಾಗದು ಎಂದು ನೆಹರೂರವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇಂತಹ ಅಪ್ರತಿಮ ಹೋರಾಟಗಾರ ಶ್ರೇಷ್ಠ ಕ್ರಾಂತಿಕಾರಿ ಕಾಂ|| ಜೈಪಾಲ್ ಸಿಂಗ್ ಭೂಗತ ಜೀವನದಲ್ಲಿದ್ದಾಗ ತೆಲಂಗಾಣ ಹೋರಾಟಗಾರರಿಗೆ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವ ತರಬೇತಿಯನ್ನು ನೀಡುವುದರೊಂದಿಗೆ ತ್ರಿಪುರಾದ ಗುಡ್ಡಗಾಡು ಜನರ ಹೋರಾಟಗಾರರಿಗೂ ಆಯುಧಗಳನ್ನು ಉಪಯೋಗಿಸುವ ತರಬೇತಿಯನ್ನು ನೀಡಿ ಕ್ರಾಂತಿಕಾರಿ ಹೋರಾಟದ ಮುಂಚೂಣಿಯಲ್ಲಿ ನಿಂತವರು. ಕಾಕತಾಳಿಯವೋ ಏನೋ ಯಾವ ಆಂಧ್ರಪ್ರದೇಶದ ತೆಲಂಗಾಣದಲ್ಲಿ ಹೋರಾಟಗಾರರಿಗೆ ಆಯುಧಗಳ ತರಬೇತಿಯನ್ನು ನೀಡಿದರೋ ಆ ರಾಜ್ಯದ ವಿಜಯವಾಡದಲ್ಲಿ ಜನವರಿ ೨೫, ೧೯೮೨ ರಂದು ನಿಧನರಾದರು. ಆಗ ಅಲ್ಲಿ ಸಿ.ಪಿ.ಐ(ಎಂ) ಪಕ್ಷದ ೧೧ನೇ ಮಹಾಧಿವೇಶನ ನಡೆಯಲಿತ್ತು. ನಾನು ಆಗಿನ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿ.ವೈ.ಎಫ್.ಐ) ನ ಕೇಂದ್ರ ಸಮಿತಿ ಸಭೆಯಲ್ಲಿ ಭಾಗವಹಿಸಲು ಹೋಗಿದ್ದೆ. ಹಾಗಾಗಿ ಅವರ ಅಂತಿಮ ದರ್ಶನವನ್ನು ಪಡೆಯುವ ಅವಕಾಶ ನನಗೆ ಸಿಕ್ಕಿತು.

ಕಾಂ|| ಜೈಪಾಲ್‌ಸಿಂಗ್ ಅವರು ನಮ್ಮ ದೇಶದ ಕೆಲವು ಮುಖ್ಯ ಸಮಸ್ಯೆಗಳಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಕಾಂಗ್ರೆಸ್ ಪಕ್ಷದ ದಿವಾಳಿಕೋತರನವನ್ನು ಮತ್ತು ಅವಕಾಶವಾದಿ ಧೋರಣೆಗಳನ್ನು ದಾಖಲೆಗಳ ಸಮೇತ ತನ್ನ ಆತ್ಮಕಥೆಯಲ್ಲಿ ಬರೆದಿದ್ದಾರೆ. ಅದೇ ಸಮಯದಲ್ಲೇ ಸೋಶಲಿಸ್ಟ್ ಪಕ್ಷ ಮತ್ತು ಜಯಪ್ರಕಾಶ್ ನಾರಾಯಣ್ ಅವರಿಗೆ ಈ ದೇಶದ ಸಮಸ್ಯೆಗಳ ಬಗ್ಗೆ ಯಾವುದೇ ಕಾರ್ಯಕ್ರಮವು ಇಲ್ಲವೆಂದು ತಿಳಿಸಿದ್ದಾರೆ.

ಮುಸ್ಲಿಂ ಲೀಗ್ ಮತ್ತು ಜಿನ್ನಾರನ್ನು ಎತ್ತಿಕಟ್ಟಿ ದೇಶವನ್ನು ಧರ್ಮದ ಆಧಾರದಲ್ಲಿ ಒಡೆಯಲು ಬ್ರಿಟಿಷರು ಷಡ್ಯಂತ್ರ ರೂಪಿಸಿದಾಗ ಅಂದಿನ ಕಾಂಗ್ರೆಸ್ ನಾಯಕತ್ವ ಯಾವ ರೀತಿ ಗೋಸುಂಬೆ ರೂಪ ತಾಳಿತು ಎಂಬುದನ್ನು ಕಾಂ|| ಜೈಪಾಲ್ ಸಿಂಗ್‌ರು ಬಯಲು ಮಾಡಿದ್ದಾರೆ. ಇಂತಹ ಒಬ್ಬ ಶ್ರೇಷ್ಠ ಕ್ರಾಂತಿಕಾರಿಯ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ತರುತ್ತಿರುವುದು ನಿಜವಾಗಿಯೂ ಹೆಮ್ಮೆ ಪಡುವಂತಹ ವಿಷಯ.

– ಜಿ.ವಿ.ಶ್ರೀರಾಮರೆಡ್ಡಿ

Create a free website or blog at WordPress.com.
Entries and ಟಿಪ್ಪಣಿಗಳು feeds.